ಮಳವಳ್ಳಿ ಸುಂದರಮ್ಮ
1905. ಪ್ರಸಿದ್ಧ ರಂಗಭೂಮಿ ಕಲಾವಿದೆ. 1905 ಸೆಪ್ಟಂಬರ್ 12ರಂದು ಮೈಸೂರಿನಲ್ಲಿ ಹುಟ್ಟಿದರು. ಪ್ರಸಿದ್ಧ ಪಿಟೀಲು ವಿದ್ವಾಂಸರಾಗಿದ್ದ ಮಳವಳ್ಳಿ ಸುಬ್ಬಣ್ಣ ಇವರ ತಂದೆ; ತಾಯಿ ಲಕ್ಷ್ಮೀದೇವಮ್ಮ, ಸುಂದರಮ್ಮನವರಿಗೆ ಪ್ರಥಮವಾಗಿ ತಂದೆಯೇ ಎರಡು ವರ್ಷಗಳ ಕಾಲ ಕರ್ನಾಟಕ ಸಂಗೀತದ ಪಾಠ ಹೇಳಿದರು. ಸುಬ್ಬಣ್ಣನವರು ಶ್ರೀಕೃಷ್ಣವಿಲಾಸ ನಾಟಕ ಸಭಾಮಂಡಳಿಯನ್ನು ವಹಿಸಿಕೊಂಡಾಗ ಸುಂದರಮ್ಮನವರ ಪ್ರಥಮ ರಂಗಪ್ರವೇಶವಾಯಿತು. ಅಗ ಏಳು ವರ್ಷದವರಾಗಿದ್ದ ಇವರು ಕಲಾವತಿಪರಿಣಯ. ಪಾಂಡುವಿಜಯ, ಸದಾರಮೆ. ಗುಲೇಬಕಾವಲಿ, ಚೋರಕಥೆ. ಸಾರಂಗಧರ ಮತ್ತು ವಸಂತ ಮಿತ್ರವಿಜಯ ಮುಂತಾದ ನಾಟಕಗಳಲ್ಲಿ ಬಾಲಪಾತ್ರಗಳನ್ನು ವಹಿಸುತ್ತಿದ್ದರು. ಮುಂದೆ ಶ್ರೀಶಾರದಾವಿಲಾಸ ನಾಟಕ ಸಭಾ ಎಂಬ ನಾಟಕ ಮಂಡಲಿಯಲ್ಲಿ ಸುಭದ್ರೆಯ ಪಾತ್ರವಹಿಸಿ ಹೆಸರುಗಳಿಸಿದರು. ಇವರು ಸಂಗೀತದಲ್ಲಿ ಹೆಚ್ಚು ಜ್ಞಾನ ಸಂಪಾದಿಸಲೋಸುಗ ಪಿಟೀಲು ತಾಯಪ್ಪನವರಲ್ಲಿ ಒಂದೆರಡು ವರ್ಷವೂ ಬೆಂಗಳೂರಿನಲ್ಲಿ ನೆಲಸಿದ್ದ ವಾಸುದೇವಾಚಾರ್ಯರ ಬಳಿ ಕೆಲವು ಅಪರೂಪದ ಕೀರ್ತನೆಗಳನ್ನೂ ಹೇಳಿಸಿಕೊಂಡರಲ್ಲದೆ ಮುಂದೆ ಸೇಲಂ ದೊರೆಸ್ವಾಮಿ ಅಯ್ಯಂಗಾರ್ ಮತ್ತು ಪುಟ್ಟಸ್ವಾಮಯ್ಯ ಇವರ ಹತ್ತಿರವೂ ಸಂಗೀತಾಭ್ಯಾಸ ಮಾಡಿದರು. ಇವರ 18ನೆಯ ವರ್ಷದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಣತಿಯಂತೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಾಟಕ ಪ್ರದರ್ಶಿಸಿ ಅವರನ್ನು ಮೆಚ್ಚಿಸಿದುದಲ್ಲದೆ ಮಹಾರಾಜರ ಮುಂದೆ ಅವರ ಬೇಸಗೆ ಅರಮನೆಯಲ್ಲಿ ಸಂಗೀತ ಕಚೇರಿ ನಡೆಸಿ ಅವರಿಂದ ಬಹುಮಾನ ಕೂಡ ಪಡೆದರು. 1924ರಲ್ಲಿ ಮದರಾಸಿನ ಓಡಿಯನ್ ಕಂಪನಿ ಸುಂದರಮ್ಮನವರ ರಂಗಗೀತೆಗಳನ್ನು ಧ್ವನಿ ಮುದ್ರಿಸಿಕೊಂಡಿತು. ಮುಂದೆ ಇವರು ಅನೇಕ ಕಡೆ ಸಂಗೀತ ಕಚೇರಿಮಾಡಿ ನಾಡಿನ ವಿದ್ವಾಂಸರ, ರಸಿಕರ ಮೆಚ್ಚುಗೆ ಗಳಿಸಿದರು. ಕೆಲವು ಹೆಸರಾಂತ ನಾಟಕ ಮಂಡಳಿಯಲ್ಲಿ ಪ್ರಧಾನ ನಟಿಯಾಗಿ ಅಭಿನಯಿಸಿದರು. 1937ರಲ್ಲಿ ತೆರೆಕಂಡ ಚಿರಂಜೀವಿ ಚಲನಚಿತ್ರದಲ್ಲಿ ಮರುಧ್ವತಿಯ ಪಾತ್ರಮಾಡಿ ಜನರ ಮೆಚ್ಚುಗೆ ಪಡೆದರು. ಭಕ್ತ ಮಾರ್ಕಂಡೇಯನ ಕುರಿತಾದ ಚಿತ್ರ. ಬಸವರಾಜ ಮನ್ಸೂರ್, ಅಮೀರ್‍ಬಾಯಿ ಕರ್ನಾಟಕಿ, ಮುದವೀಡು ಕೃಷ್ಣರಾಯರು, ದೇವುಡು ನರಸಿಂಹಶಾಸ್ತ್ರಿಗಳು ಮೊದಲಾದ ಸಾಹಿತಿಗಳು ಕಲಾವಿದರು ಪಾತ್ರ ವಹಿಸಿದ್ದರು. ಸುಮಾರು 60 ಮಂದಿ ನಟನಟಿಯರ ಜೀವನಾಧಾರವಾಗಿದ್ದ ಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ ಅಡಳಿತವನ್ನು 1943ರಲ್ಲಿ ವಹಿಸಿಕೊಂಡು ಯಶಸ್ವಿಯಾಗಿ ಅನೇಕ ನಾಟಕಗಳನ್ನು ಪ್ರದರ್ಶಿಸಿ ಹಣ, ಹೆಸರು ಗಳಿಸಿದರಲ್ಲದೆ ಸುಮಾರು 30,000 ರೂಪಾಯಿಗಳನ್ನು ದಾನಧರ್ಮ ಮಾಡಿದರು. ಸಂಗೀತ ಮತ್ತು ನಾಟಕದಲ್ಲಿ ಇವರ ಸೇವೆಯನ್ನು ಗಮನಿಸಿ 1962ರಲ್ಲಿ ರಾಜ್ಯ ಸರ್ಕಾರ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. 'ಅಭಿನಯ ಶಾರದೆ ಎಂಬ ಇವರ ಜೀವನ ಚರಿತ್ರೆ ಪ್ರಕಟವಾಗಿದೆ.	
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ